" ಕಣ್ಣಿದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪಿ ನೋಡಬೇಕು". ಕನಕಗಿರಿ ಎರಡನೇ ತಿರುಪತಿಯಾಗಿದ್ದು. ಒಂದು ಐತಿಹಾಸಿಕ ಪ್ರವಾಸಿ ಕೇಂದ್ರ. ಹಂಪೆಯಲ್ಲಿರುವ ಹತ್ತಾರು ದೇವಾಲಯ ಹಾಗೂ ಐತಿಹಾಸಿಕ ತಾಣ ಸುತ್ತಿಬರಲು ಕಾಲು ಗಟ್ಟಿಯಾಗಿರುವವರಿಗೆ ಮಾತ್ರವೇ ಸಾಧ್ಯ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಕಣ್ಣಿದ್ದವರಿಗೆ ಕನಕಗಿರಿ ಎಂಬ ಮಾತು ಬಂದಿದ್ದೇಕೆ ಎಂಬುದನ್ನು ಈ ತಾಣಕ್ಕೆ ಭೇಟಿ ಕೊಟ್ಟರೆ ಮಾತ್ರವೇ ತಿಳಿದೀತು. ಸೌಂದರ್ಯದ ಗಣಿಯಾದ ಈ ದೇವಾಲಯದಲ್ಲಿರುವ ಶಿಲ್ಪಕಲೆ, ನಯನ ಮನೋಹರವಾದ ದೇವತಾಮೂರ್ತಿಗಳನ್ನು ಕಣ್ಣಿದ್ದವರು ಮಾತ್ರವೇ ಕಂಡು ಆನಂದಿಸಲು ಸಾಧ್ಯ.
ಇಲ್ಲಿ 700 ದೇವಸ್ಥಾನಗಳು, 700 ಭಾವಿಗಳು, 700 ಗೋಲ್ಲರ ಮನೆಗಳಿದ್ದವೆಂದು ಇತಿಹಾಸದಿಂದ ತಿಳಿಯುತ್ತದೆ. ಇವು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಾಣಗೊಂಡ ದೇವಸ್ಥಾನಗಳಾಗಿವೆ. ಇವುಗಳ ಕಾರಣಿಕರ್ತರು ಗುಜ್ಜಲವಂಶದ ರಾಜನಾದ ಉಡಚಪ್ಪನಾಯಕನು ಈ ಸುಂದರ ದೇವಸ್ಥಾನಗಳನ್ನು ಕಟ್ಟಿಸಿದನು.ಇಲ್ಲಿನ ಕನಕಾಚಲಲಕ್ಷ್ಮೀ ನರಸಿಂಹ ಸ್ವಾಮಿಯು ಉದ್ಭವ ಮೂರ್ತಿಯಾಗಿದ್ದು ಇದನ್ನೂ ನೋಡುವುದೇ ಒಂದು ಸುಂದರ ಅನುಭವ. ಇಲ್ಲಿ ದೇವಸ್ಥಾನದ ಪಕ್ಕದಲ್ಲಿ ಹರಿಯುವ ತ್ರೀವೇಣಿ ಸಂಗಮವು ಕೂಡ ವಿಶೇಷ.
ಕನಕಗಿರಿಯ ಇತಿಹಾಸ :
ಭಾರತದ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಸ್ಮರಣೀಯವಾದದು. ದಕ್ಷಿಣದಿಂದ ದಂಡೆತ್ತಿ ಬರುತ್ತಿದ್ದ ಮುಸ್ಲಿಮರ ದಾಳಿಂದ ತತ್ತರಿಸಿದ್ದ ಹಿಂದೂ ಧರ್ಮದ ಪುನರುತ್ಥಾನಕ್ಕೆ ನಾಂದಿ ಹಾಡಿತಲ್ಲದೆ ಎರಡು ಶತಮಾನಗಳಿಗೂ ಹೆಚ್ಚು ಕಾಲ ಸಾಮ್ರಾಜ್ಯವಾಳಿ `ಸುವರ್ಣಯುಗ'ವೆಂದು ಕರೆಸಿಕೊಂಡ ಕೀರ್ತಿ ವಿಜಯನಗರಕ್ಕೆ ಸಲ್ಲುತ್ತದೆ. ಇಂಥ ಮಹತ್ವದ ಯುಗದಲ್ಲಿ ಬೆಳಕಿಗೆ ಬಂದ ಶಿಲ್ಪ ಸಂಪತ್ತಿನ ಕಲಾ ಕಣಜ ಕನಕಗಿರಿ.
"ನಡೆದು ನೋಡಲು ಹೋಗು ಹಂಪಿ ಸಿರಿ
ಮನತಣಿದು ನೋಡಲು ಬಾ ಕನಕಗಿರಿ" ಎಂಬ ಕವಿಯ ಸಾಲುಗಳು ಅಕ್ಷರಶ: ಸತ್ಯ ಎಂದು ಕನಕಗಿರಿಯನ್ನು ನೋಡಿದ ಹೃದಯವಂತ ಪ್ರವಾಸಿಗರಿಗೆ ಅನಿಸದೆ ಇರದು. ಕನಕಗಿರಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿಗೆ ಸೇರಿದ ಒಂದು ಐತಿಹಾಸಿಕ ಪ್ರವಾಸಿ ತಾಣ. ಜಿಲ್ಲಾ ಕೇಂದ್ರ ಸ್ಥಾನದಿಂದ ೪೮ ಕಿ.ಮಿ, ತಾಲೂಕು ಕೇಂದ್ರ ಸ್ಥಾನದಿಂದ ೨೨ ಕಿ.ಮಿ ಹಾಗೂ ಜಗತ್ಪ್ರಸಿದ್ದ ಹಂಪೆಂದ ೨೦ ಮೈಲಿಗಳ ದೂರದಲ್ಲಿ ಶಿಲ್ಪ ಸಂದೌರ್ಯದ ಈ ರಮ್ಯ ತಾಣವಿದೆ.
ಕನಕಗಿರಿ ಹೆಸರಿನ ಹಿಂದಿನ ಮರ್ಮ: ದಂತಕಥೆಗಳಲ್ಲಿ ಹೆಸರಿಸಲಾದ ವಾರಾಣವಾತಿ ಎಂಬ ಹೆಸರಿನ ಈ ಪ್ರದೇಶದವು ಪುಷ್ಪ ಮತ್ತು ಜಯಂತಿ ಎಂಬ ನದಿಗಳೆರಡರ ಸಂಗಮದ ತಾಣವಾಗಿತ್ತು ಮತ್ತು ಈ ಪ್ರದೇಶವು ದಟ್ಟವಾದ ಕಾಡಿನಿಂದ ಆವೃತ್ತಗೊಂಡಿತ್ತು. ಇಲ್ಲಿ ಜಯಂತ ನರಸಿಂಹ ಎಂಬ ದೇವರು ನೆಲೆಸಿದ್ದನು. ಈ ನದಿ ತಟದಲ್ಲಿ ಇಪ್ಪತ್ತ ನಾಲ್ಕು ಜನ ಬೌದ್ಧ ಮುನಿಗಳಲ್ಲಿ ಒಬ್ಬರಾಗಿದ್ದರೆನ್ನಲಾದ `ಕನಕಮುನಿ'ಇಲ್ಲಿ ತಪಸ್ಸು ಗೈದು ಕೆಲ ಕ್ಷಣ ಕನಕವೃಷ್ಟಿ ಅಂದರೆ ಚಿನ್ನದ ಮಳೆ ತರಿಸಿದ ಈ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಕನಕಗಿರಿ ಎಂದು ಕರೆಯಲಾತು ಎಂದು ಹೇಳಲಾಗುತ್ತಿದೆ. ಸ್ಕಂದ ಪುರಾಣದ ತುಂಗ ಮಹಾತ್ಮೆಯಲ್ಲಿ ಈ ಸ್ಥಳದ ಮಹಿಮೆಯನ್ನು ಹಾಗೂ ದೇವರ ಚರಿತೆಯನ್ನು ವರ್ಣಿಸಲಾಗಿದೆ ಅಲ್ಲದೆ ಈ ಪುರಾಣದಲ್ಲಿ ಕನಕಗಿರಿಯನ್ನು `ಸುವರ್ಣಗಿರಿ' ಎಂದು ಕರೆಯಲಾಗಿದೆ. ಹಂಪೆಂದ ೨೦ ಮೈಲುಗಳ ದೂರದಲ್ಲಿ `ಸುವರ್ಣಗಿರಿ' ಅಂದರೆ ಕನಕಗಿರಿ ಇರುವುದಾಗಿ ಹೇಳಿದ್ದು ಅಲ್ಲಿ ಹೇಳಲಾಗಿರುವ ಭೌಗೋಳಿಕ ಅಂಶಗಳೆಲ್ಲ ಸತ್ಯವಾಗಿವೆ. ಕನಕಗಿರಿ ಹಾಗೂ ಇಲ್ಲಿರುವ ಇತಿಹಾಸಿದ ಕುರಿತು ಹಲವಾರು ಇತಿಹಾಸ ತಜ್ಷರು ರೋಚಕದ ಅಂಶಗಳನ್ನು ಹೊರಗೆಡಿಹಿದ್ದಾರೆ. ಶಾಸನಗಳಿಂದ ಸಂಗ್ರಹಿಸಲ್ಪಟ್ಟ ಹಲವು ವಿಷಯಗಳು ಕನಕಗಿಯ ಇತಿಹಾಸವನ್ನು ಹೇಳುತ್ತಿವೆ. ಕ್ರಿಸ್ತಯುಗದ ಪ್ರಾರಂಭದಲ್ಲಿ ಟಾಲೆವಿಯನೆಂಬ ವಿದೇಶಿಯನು ತನ್ನ ಪ್ರವಾಸಕಥನದಲ್ಲಿ `ಕಲಿಗೇರಿಯಸ್' (ಕನಕಗಿರಿ) ಮತ್ತು `ಮೊದಗಾಲ್' (ಮುದಗಲ್) ವ್ಯಾಪಾರದ ಕೇಂದ್ರಗಳಾಗಿದ್ದವು ಎಂದು ಹೇಳಿದ್ದಾನೆ.
ಶ್ರೀಕನಕಾಚಲ ಲಕ್ಷ್ಮೀ ನರಸಿಂಹ ದೇವಾಲಯ :
ಚಿನ್ನದ ಮಳೆಯ ನಂತರದ ವರ್ಷಗಳಲ್ಲಿ ಕಾಲಕ್ರಮೇಣ ಪಕ್ರೃತಿಯ ವಿಕೋಪಕ್ಕೆ ದಟ್ಟವಾದ ಕಾಡಿನ ನದಿ ತಟದಲ್ಲಿದ್ದ ಜಯಂತ ನರಸಿಂಹ ಲಿಂಗಾಕಾರದ ಸಾಲಿಗ್ರಾಮವು ಮಣ್ಣೊಳಗೆ ಹೂತು ಹೋಗಿದ್ದಾಗಿ ಹೇಳಲಾಗುತ್ತಿದೆ. ಅಲ್ಲದೆ ತದ ನಂತರದಲ್ಲಿ ಗುಜ್ಜಲವಂಶದ ಮೊದಲ ದೊರೆ ಪರಸಪ್ಪ ಈ ಪ್ರದೇಶಕ್ಕೆ ಬಂದು ಇಲ್ಲೆ ನೆಲೆಸಿದ್ದನು. ಒಮ್ಮೆ ಹಾಲು ಕೊಡುವ ಹಸುವೊಂದು ಹುತ್ತಕ್ಕೆ ಹಾಲುಗರೆಯುವುದನ್ನು ಕಂಡರು.ಇದರಿಂದ ಆಶ್ಚರ್ಯನಾದ ಪರಸಪ್ಪ ಉಡಚಿನಾಯಕ ಹುತ್ತವನ್ನು ಕೀಳಿಸಿದನು. ಹುತ್ತ ಕೀಳುವ ಹಾಳು ಮೂರ್ಛೆ ಹೋದರು.ಇದರಿಂದ ಚಿಂತಿತನಾಗಿದ್ದ ಪರಸಪ್ಪನಿಗೆ ಕನಸಿನಲ್ಲಿ ಕಾಣಿಸಿಕೊಂಡು ತಿರುಪತಿ ಗಿರಿವಾಸ ಶ್ರೀವೆಂಕಟೇಶ ಕನಕಗಿರಿಯಲ್ಲಿ ಸಾಲಿಗ್ರಾಮ ರೂಪದಲ್ಲಿ ಲಕ್ಷ್ಮೀನರಸಿಂಹನಾಗಿ ತಾನು ನೆಲೆಸಿ ಭಕ್ತರ ಬೇಡಿಕೆ ಈಡೇರಿಸುವುದಾಗಿ ತಿಳಿಸಿ ಇಲ್ಲಿ ದೇವಾಲಯ ನಿರ್ಮಾಣ ಮಾಡಲು ಸೂಚಿದನು. ವಿಜಯನಗರ ಅರಸ ಪ್ರೌಢ ದೇವರಾಯನಿಗೆ ವೆಂಕಟರಮಣನ ದರ್ಶನದ ಕುರಿತು ತಿಳಿಸಿ ಅವರ ಸಹಾಯದಿಂದ ದೇವಾಲಯ ನಿರ್ಮಾಣಕ್ಕೆ ಮುಂದಾಗಿದ್ದು,ಮತ್ತು ಈ ದೇವರನ್ನು ಕನಕರಾಯ ಎನ್ನುವ ಹೆಸರಿನಿಂದ ಕರೆಯಲಾರಂಭಿಸಿದ್ದು ಇತಿಹಾಸದಿಂದ ತಿಳಿದು ಬರುತ್ತದೆ.ಸರ್ವ ಜಾತಿ, ಧರ್ಮವನ್ನು ತೊಡೆದು ಸರ್ವರಿಗೂ ದರ್ಶನಕ್ಕೆ ಮುಕ್ತವಾಗಿರುವ ಕನಕಗಿರಿಯನ್ನು ಎರಡನೆ ತಿರುಪತಿ ಎಂದು ಕರೆಯಲಾಗುತ್ತಿದೆ. ಜಾತ್ರೋತ್ಸವ ಮುನ್ನ ೯ ದಿನಗಳ ಕಾಲ ತಿರುಪತಿಯಲ್ಲಿ ನಡೆಯುವಂತೆ ನಿತ್ಯ ಬೆಳಗ್ಗೆ ಹಾಗೂ ಸಂಜೆ ಉತ್ಸವಗಳನ್ನು ರಾಜಬೀದಿಯಲ್ಲಿ ಮೆರವಣಿಗೆಯೊಂದಿಗೆ ನಡೆಸಲಾಗುತ್ತದೆ.
ಶ್ರೀಕನಕಾಚಲಪತಿ ದೇವಾಲಯ ಇಲ್ಲಿರುವ ದೇವಾಲಯಗಳಲ್ಲಿ ಅತ್ಯಂತ ಪ್ರಮುಖ ಮತ್ತು ರಮಣೀಯ, ಅಪೂರ್ವ ಶಿಲ್ಪ ಕಲಾ ಸಂಪತ್ತಿನ ದೇವಾಲಯ. ವಿಜಯ ನಗರ ಅರಸರರಲ್ಲೇ ಶ್ರೇಷ್ಠನಾದ ಶ್ರೀಕೃಷ್ಣದೇವರಾಯನ ಕಾಲವಾದ ೧೫ನೇ ಶತಮಾನದ ಪೂವಾರ್ದದಲ್ಲಿ ಕನಕಗಿರಿಯ ಪಾಳೇಯಗಾರರಾಗಿದ್ದ ಉಡುಚಪ್ಪ ನಾಯಕ ಮತ್ತು ಪರಸಪ್ಪ ಉಡಿಚನಾಯಕರ ಕಾಲದಲ್ಲಿ ಲಕ್ಷೀ ನರಸಿಂಹ ದೇವಾಲಯಗಳು ನಿರ್ಮಾಣಗೊಂಡಿದ್ದು, ಕಲಾ ಸಿರಿಗೆ ಸಾಕ್ಷಿಯಾಗಿದೆ.ಮುಂದಿನ ಪಾಳೇಯಗಾರರು ಈಗಿನ ಸ್ಥಿತಿವರೆಗೂ ಕಟ್ಟಿಸಿರುವರು.
"ಕನಕಗಿರಿಯನ್ನು ಬಡವರ ತಿರುಪತಿ" ಎಂದು ಕರೆಯಲಾಗಿದೆ. ತಿರುಪತಿಯಲ್ಲಿರುವಂತೆ ಒಂಬತ್ತು ದಿನಗಳು ಕೂಡ ದಿನಕ್ಕೊಂದರಂತೆ ಪ್ರತಿ ದಿನವು ಒಂದೊಂದು ಉತ್ಸವಗಳು ರಾಜಭೀದಿಯಲ್ಲಿ ಬಂದು ಹೋಗುತ್ತವೆ. ಪುಷ್ಟಾರೋಹಣ, ಸಿಂಹಾರೋಹಣ, ಅಶ್ವಾರೋಹಣ, ಹನುಮಂತೋತ್ಸವ, ಶೇಷೊತ್ಸವ, ಗರುಡೋತ್ಸವ, ಗಜತೋತ್ಸವ, ನಂತರ ರಥೋತ್ಸವ ಅದ್ದೂರಿಯಿಂದ ಜರುಗುತ್ತದೆ. ೨೦೮ ಅಡಿ ಉದ್ದ ಹಾಗೂ ೯೦ಅಡಿ ಅಗಲವಿರುವ ದೇವಾಲಯ ವಿಶಾಲವಾಗಿದೆ. ಕನಕಾಚಲ ದೇವರು ಸಾಲಿಗ್ರಾಮ ರೂಪದಲ್ಲಿದ್ದರೆ, ಲಕ್ಷ್ಮೀ ದೇವಾಲಯ ಸುಂದರ ಕೆತ್ತನೆಯಿಂದ ಕೂಡಿದೆ. ಒಳ ಪ್ರಾಕಾರದಲ್ಲಿ ಬ್ರಹ್ಮ, ಕೃಷ್ಣ, ಹನುಮಂತ, ಶಿವ, ಗರುಡ, ಸರಸ್ವತಿ ಮಂದಿರಗಳು, ಪಾಕಶಾಲೆ, ಯಜ್ಞಶಾಲೆ, ಕಲ್ಯಾಣ ಮಂಟಪಗಳು ಇವೆ. ಈ ದೇವಸ್ಥಾನಕ್ಕೆ ಭವ್ಯವಾದ ಮಹಾದ್ವಾರ ಮತ್ತು ಆಕರ್ಷಣೀಯ ಪಂಚ ಗೋಪುರಗಳಿವೆ. ಇಲ್ಲಿನ ಪಂಚ ಕಳಸ ದರ್ಶನದಿಂದ ಮಹಾ ಪಾಪ ವಿನಾಶವಾಗುತ್ತದೆ ಎಂಬ ನಂಬಿಕೆಯಿದೆ.
ದೇವಾಲಯದ ಮದ್ಯ ಭಾಗದಲ್ಲಿ ನಾಟ್ಯ ಶಾಲೆ ಮಹಾ ಮಂಟಪವಿದ್ದು ೩೪ ಕಂಬಗಳ ಮೇಲೆ ನಿಂತಿದೆ. ಇಲ್ಲಿರುವ ಕಂಬಗಳಲ್ಲಿ ದಶಾವತಾರದ ಕೆತ್ತನೆಗಳಿವೆ. ಎರಡು ಭಾಗದಲ್ಲಿ ಇಲ್ಲಿನ ಕಂಬಗಳಿದ್ದು ಹದಿನಾರು ಮುಖಭಾವವಿರುವ ಕಾಲೆತ್ತಿ ನಿಂತಿರುವ ಕುದುರೆಯಾಕಾರದ ಸಿಂಹಾಕಾರದ ಕೆತ್ತನೆಯ ಚಾಚು ಪೀಠಗಳಿವೆ. ಮಂಟಪದಲ್ಲಿ ವಿವಿಧ ಭಂಗಿಯ ಪೌರಾಣಿಕ ಚಿತ್ರಗಳಿವೆ ದ್ರಾವಿಡ ಶ್ಯೆಲಿಯ ಶಿಖರವಿದೆ.
ಮಧ್ಯರಂಗ ಮಂಟಪದ ಮೇಲ್ಭಾಗದಲ್ಲಿ ಉಮಾಮಹೇಶ್ವರರ ವಿವಾಹದ ಹಾಗೂ ಸೀತಾರಾಮ ಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕದ ಹಾಗೂ ಮತ್ತಿತರ ಅಪರೂಪದ ಮಧ್ಯಕಾಲೀನ ವರ್ಣ ಶಿಲ್ಪಗಳಿವೆ. ನರಸಿಂಹ ದೇವಾಲಯ ಪಕ್ಕದಲ್ಲಿ ಲಕ್ಷಿ ದೇವಾಲಯವಿದೆ, ದೇವಾಲಯ ಸುತ್ತಲೂ ವಿವಿಧ ರಾಮಾಯಣ ಮಹಾಭಾರತ ಕಥೆ ಬಿಂಬಿಸುವ ಪದ್ಮಾಸನದ ಶಿವ,ಹೊರ ಪ್ರಾಂಗಣದಲ್ಲಿ ಉಡಿಚ ನಾಯಕ, ವೆಂಕಟಪ್ಪ ನಾಯಕ, ಕನಕಪ್ಪ ನಾಯಕ, ಇಬ್ಬರು ರಾಣಿಯರ ಶಿಲ್ಪಗಳಿವೆ. ರಾಜವೇಷ ನಿಲುವಂಗಿ ಧರಿಸಿರುವ ರೀತಿ ನೋಡಿದರೆ ಹೃದಯ ತಟ್ಟುತ್ತವೆ.
ಕನಕಾಚಲ ದೇವಾಲಯದ ಮುಂದೆ ಗರುಡ ಗುಡಿ ಇದೆ. ಹೊರ ಪ್ರಾಂಗಣದಲ್ಲಿ ಪ್ರದಕ್ಷಿಣಿಪಥವಿದೆ. ಬ್ರಹ್ಮ ,ವಿಷ್ಣು,ಮಹೇಶ್ವರ ಗುಡಿಗಳಿವೆ. ಆಳೆತ್ತರದ ಸುಂದರ ಮೂಲಪ್ರಾಣ ಸಂಜೀವಮೂರ್ತಿ ವಿಗ್ರಹಗಳಿವೆ. ಕನಕಾಚಲಪತಿ ದೇವಸ್ಥಾನದ ಬಲ ಭಾಗದಲ್ಲಿ ಸುಮಾರು ಒಂದು ಕಿ.ಮೀ. ಪಶ್ವಿಮದ ಕಡೆಗೆ ಉದ್ದವಾದ ನೂರಡಿ ಅಗಲ ವಿಸ್ತಾರವಾದ ರಾಜ ಬೀದಿ ಇದೆ. ಇಲ್ಲಿನ ರಾಜಬೀದಿಯ ಎಡ ಮತ್ತು ಬಲ ಬದಿಯಲ್ಲಿ ಅನೇಕ ದೇವಾಲಯಗಳಿವೆ. ಶಿವಲಿಂಗ, ಗಜಲಕ್ಷ್ಮೀ, ಮಹಾಲಕ್ಷ್ಮೀ, ಪಂಪಾವತಿ, ಪೇಟೆಬಸವ,ಎದುರು ಹನುಮಪ್ಪ, ಗಣೇಶ, ಮಹಿಸಾಸುರ ಮರ್ದಿನಿ, ದುರ್ಗಾದೇವಿ, ನಗರೇಶ್ವರ, ಕಾಳಿಕಾದೇವಿ, ತೇರಿನ ಹನುಮಪ್ಪ, ವೀರಭದ್ರೇಶ್ವರ, ಸರಸ್ವತಿ, ಹಿರೇಹಳ್ಳದ ಬಸವೇಶ್ವರ, ಯಲ್ಲಮ್ಮ, ಲಕ್ಷ್ಮೀದೇವಾಲಯ, ಮಲ್ಲಿಕಾರ್ಜುನ, ಪಾಂಡುರಂಗ ದೇವಾಲಯಗಳಿವೆ. ಹಾಗೂ ಅನೇಕ ರಾಜರುಗಳ ಕೆತ್ತನೆಗಳಿವೆ. ವೃತ್ತವಾಗಿರುವ ಕೋಟೆಯು ಮುರು ಪ್ರವೇಶ ದ್ವಾರಗಳನ್ನು (ಅಗಸಿಗಳನ್ನು) ಹೊಂದಿದೆ. ಅಲ್ಲಲ್ಲಿ ಕೊಟೆಯ ಕಾವಲು ಗೋಪುರಗಳಿವೆ.
ವೆಂಕಟಪತಿ ಬಾವಿ :
ಕನಕಗಿರಿಯಲ್ಲಿ ಮಧ್ಯಕಾಲೀನ ಕರ್ನಾಟಕದ ವಾಸ್ತುಶಿಲ್ಪದಂತೆ ನಿರ್ಮಿಸಲಾದ ವೆಂಕಟಪತಿ ಬಾವಿ ಅಥವಾ ಜಲಕ್ರೀಡಾ ಭವನವಿದೆ. ಈ ಬಾವಿಯು ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಕನಕಗಿರಿಯ ಹೊರವಲಯದಲ್ಲಿರುವ APMC ಆವರಣದೊಳಗೇ ನೆಲೆಗೊಂಡಿದೆ. 30 ಅಡಿ ಆಳದ ವೆಂಕಟಪತಿ ಬಾವಿಯನ್ನು 1586 ರಲ್ಲಿ ಕನಕಪ್ಪ ನಾಯಕನ ತಮ್ಮ ವೆಂಕಟಪ್ಪ ನಾಯಕ ನಿರ್ಮಿಸಿದ್ದು ಆತನ ಹೆಸರಿನಿಂದಲೇ ಕರೆಯಲಾಗುವದು. ಈ ಬಾವಿಯು ರಾಜ ಕುಟುಂಬದ ಸದಸ್ಯರಿಗೆ ಮಾತ್ರ ಮೀಸಲಾಗಿತ್ತು.
ಇಲ್ಲಿನ ವೆಂಕಟಪತಿ ಬಾವಿ ಹಂಪಿಯ ರಾಣಿಯರ ಸ್ನಾನದ ಗೃಹಕ್ಕಿಂತ ಚೆನ್ನಾಗಿದೆ. ಸುತ್ತಲೂ ಈಶ್ವರ ಪಾರ್ವತಿ ವೆಂಕಟರಮಣರ ಮೂರ್ತಿ ಇವೆ.ಇದು ನೆಲಮಟ್ಟಿದಿಂದ ಕೆಳಗೆ ಇರುವದರಿಂದ ಹತ್ತಿರ ಹೋಗುವವರೆಗೂ ಕಾಣುವದಿಲ್ಲ,ಇದನ್ನು ಕೆಳಗಿಳಿದ ಮೂರು ಬದಿಗಳಲ್ಲಿ ಒಂದು ಹಜಾರ ಸುತ್ತುವರೆದಿದೆ. ಇದು ಯಾತ್ರಿಗಳಿಗೆ ಒಂದು ದೇವಸ್ಥಾನ ಮತ್ತು ಆಶ್ರಯ ಹೊಂದಿದೆ. ಇಲ್ಲಿಯ ವಿಶೇಷವೆಂದರೆ ಸಿಂಹ ಶಿಲ್ಪದ ಬಾಯಲ್ಲಿ ಗುಂಡುಗಳೂ ಅಲುಗಾಡಲು ಬರುವಂತೆ ಕೆತ್ತಲಾಗಿದೆ.
ಇದನ್ನು ರಾಣಿಯರ ಸ್ನಾನ ಗೃಹವೆಂದು ಕರೆಯುತ್ತಿದ್ದರು. ಇದು ನಾಲ್ಕು ಪ್ರವೇಶ ಹಾದಿಗಳನ್ನು ಹೊಂದಿದೆ. ಮೂರು ಬಹುತೇಕ ರಹಸ್ಯ ಪ್ರವೇಶಗಳ ರೀತಿಯ ಸಂಕುಚಿತ ಹಾದಿಗಳು,ನಾಲ್ಕನೆಯ ಒಂದು ಸಾಮಾನ್ಯ ಮತ್ತು ವ್ಯಾಪಕ ಮುಕ್ತ ಮೆಟ್ಟಿಲಸಾಲು ಹೊಂದಿದೆ. ಎಡಭಾಗದಲ್ಲಿ, ಕಂಬಗಳ ಸಾಲು ಹಿಂದೆ ತೆರೆದ ಹಾಲ್ ಮತ್ತು ದೇವಾಲಯದ ಪ್ರವೇಶವಿದೆ. ಎರಡು ಅಂತಸ್ತಿನ ಬಾಲ್ಕನಿ ಕಟ್ಟಡ ಆಕರ್ಷಣಿಯವಾಗಿದೆ. ಈ ಬಾವಿ ಕನಕಗಿರಿ ಐತಿಹಾಸಿಕದಲ್ಲಿ ಅದ್ಬುತವಾಗಿದೆ.
ಕಮಾನಿನ ಗೋಡೆಗಳ ಮೇಲೆ ನೀರಿನ ಮಸುಕಾದ ಚಿಹ್ನೆಗಳನ್ನು ನೋಡಬಹುದು. ಭಾವಿಯ ಒಳಗಡೆ ಸ್ತಂಭದ ಭವನಗಳು ಇವೆ.
ಕುದುರೆ ಥೀಮ್ ಕಂಬಗಳು :
ಕಂಬಗಳಲ್ಲಿ ಜ್ಯಾಮಿತಿಯ, ಹೂವಿನ, ಪ್ರಾಣಿಗಳ ಮತ್ತು ಸ್ವಸ್ತಿಕಾ ಚಿಹ್ನೆಗಳ ಒಳಗೊಂಡಿರುವ, ಸರಳ ಮತ್ತು ಸುಂದರವಾದ ಕೆತ್ತನೆಗಳಿವೆ.ಗೋಡೆಗಳ ಮೆಲೆ ಸರಳ ಹೂವಿನ ವಿನ್ಯಾಸಗಳು ಮತ್ತು ಗಿಳಿಗಳು ನಂತಹ ಹಕ್ಕಿಗಳಲ್ಲಿ ಅಲಂಕರಿಸಲಾಗಿದೆ.
ನರಸಿಂಹ ತೀರ್ಥ ಪುಷ್ಕರಣಿ :
ವೆಂಕಟಾಪತಿ ಭಾವಯಿಂದ ಮಾರುದೂರದಲ್ಲಿರುವ ಪುಷ್ಕರಣಿಯು ತಿರುಪತಿಯಲ್ಲಿರುವ ಕಲ್ಯಾಣಿ ಪುಷ್ಕರಣಿಯನ್ನು ನೆನಪಿಗೆ ತರುತ್ತದೆ. ಪೂರ್ವದಂತೆ ಪಶ್ಚಿಮ ದಿಕ್ಕಿನಲ್ಲೂ ಮತ್ತೊಂದು ಪುಷ್ಕರಣಿ ಇದ್ದು ಇವು ಉಡಚಿನಾಯಕನ ಮಗನಾದ ಕನಕಯ್ಯ ಉಡಚಿನಾಯಕ ಕಟ್ಟಿಸಿದನೆಂದು ಹೇಳಲಾಗುತ್ತಿದೆ. ಕನಕಾಚಲ ದೇವಸ್ಥಾನದ ಧಾರ್ಮಿಕ ಉತ್ಸವಗಳಿಗಾಗಿ ನರಸಿಂಹ ತೀರ್ಥ ಪುಷ್ಕರಣಿಯನ್ನು ನಿರ್ಮಿಸಲಾಗಿದೆ. ಹಿಂದೆ ಇಲ್ಲಿ ಕನಕಾಚಲನ ತಪೊತ್ಸವ ನಡೆಸಲಾಗುತ್ತಿತ್ತು. ಈ ಪುಷ್ಕರಣಿಯಲ್ಲಿ ಭಕ್ತರು ಸ್ನಾನ ಮಾಡಿದ ನಂತರ ದೇವರ ದರ್ಶನ ಮಾಡುತ್ತಿದ್ದರು.
ಈ ಎರಡು ವಿಶಾಲವಾದ ಪುಷ್ಕರಣಿಗಳ ಸುತ್ತಲೂ ಹಲವು ದೇವಸ್ಥಾನಗಳನ್ನು ನಿರ್ಮಿಸಲಾಗಿದೆ. ಅದೇ ರೀತಿಯಾಗಿ ಈ ಪುಷ್ಕರಣಿಯ ಪಶ್ಚಿಮಕ್ಕೆ ದೊಡ್ಡದಾದ ವೆಂಕಟರಮಣ ದೇವಾಲಯ ಇದೆ. ಇದಕ್ಕೆ ಸೂರ್ಯನಾರಾಯಣ ದೇವಾಲಯ ಎಂಬ ಮತ್ತೂಂದು ಹೆಸರೂ ಇದೆ. ಪುಷ್ಕರಣಿ ಹತ್ತಿರ ಏಳು ಹೆಡೆ ಸರ್ಪದ ಕಲ್ಲಿನ ಮೂರ್ತಿಯು ನೋಡಲು ಸುಂದರವಾಗಿದೆ. ಪುಷ್ಕರಣಿ ಮಧ್ಯೆ ಇರುವ ಮಂಟಪ ನೋಡುಗರನ್ನು ಆಕರ್ಷಿಸುತ್ತದೆ.
ಕನಕಗಿರಿ ರಥ :
ಕನಕಗಿರಿಯ ತೇರು ದಕ್ಷಿಣ ಭಾರತದಲ್ಲಿಯೇ ಅತಿ ಎತ್ತರದ ತೇರು ಎಂಬ ಖ್ಯಾತಿ ಪಡೆದಿದೆ. ಈ ತೇರು ಕೆಲವಡಿ ಉಡಿಚ ನಾಯಕನ ಆಳ್ವಿಕೆ ಕಾಲದಲ್ಲಿ ನಿರ್ಮಾಣವಾಗಿದೆ. 1905ರಲ್ಲಿ ನಿರ್ಮಿಸಲಾದ ಬೃಹತ್ ರಥದಲ್ಲಿ ಮಹಾಭಾರತ, ರಾಮಾಯಣದ ಕಥಾನಕಗಳ ಕೆತ್ತನೆ ಇದೆ. ಪ್ರತಿವರ್ಷ ಫಾಲ್ಗುಣ ಮಾಸದಲ್ಲಿ ಕನಕಾಚಲಪತಿಗೆ ತಿರುಪತಿಯ ವೆಂಕಟೇಶನಿಗೆ ನಡೆಯುವ ರೀತಿಯಲ್ಲೇ ವೈಭವದ ಬ್ರಹ್ಮರಥೋತ್ಸವ ನಡೆಯುತ್ತದೆ. ಕನಕಗಿರಿ ಜಾತ್ರೆಯು ಹೋಳಿ ಹುಣ್ಣಿಮೆಯಾದ 9 ದಿನಗಳ ನಂತರ ವಿಜ್ರಂಭಣೆಯಿಂದ ಜರುಗುತ್ತದೆ. ಹೋಳಿ ಹುಣ್ಣಿಮೆಯ ಒಂದು ದಿನದ ಮುಂಚೆ ಪಟ ಕಟ್ಟುತ್ತದೆ. ನಂತರ ಪ್ರತಿ ದಿನವು ಒಂದೊಂದು ಉತ್ಸವಗಳು ಜರುಗುತ್ತವೆ. ಜಾತ್ರೆಯ ಕಾಲದಲ್ಲಿ ಅಂಕುರಾರ್ಪಣ, ಧ್ವಜಾರೋಹಣ, ಕಲ್ಯಾಣೋತ್ಸವ, ಬಲಿ, ಬ್ರಹ್ಮರಥೋತ್ಸವ, ಶೇಷೋತ್ಸವ, ಗರುಡೋತ್ಸವ, ಉಯ್ಯಾಲೋತ್ಸವ, ಗಜೋತ್ಸವ, ಶಯನೋತ್ಸವ, ವಸಂತೋತ್ಸವ ಮೊದಲಾದ ಧಾರ್ಮಿಕ ವಿಧಿಗಳು ಜರುಗುತ್ತವೆ. ರಾಜ್ಯದ ವಿವಿಧ ಕಡೆಯಿಂದ ಬರುವ ಭಕ್ತರು ನೈವೇದ್ಯ ಮಾಡಿ ತಲೆಮಂಡೆ ನೀಡಿ, ದೀಡ ನಮಸ್ಕಾರ ಹಾಕಿ ಸೇವೆ ಸಲ್ಲಿಸುತ್ತಾರೆ. ಜಾತಿ - ಧರ್ಮ ಭೇದವಿಲ್ಲದೆ ಈ ದೇವಸ್ಥಾನಕ್ಕೆ ಸರ್ವ ದರ್ಮಿಯರು ಭಕ್ತರಿದ್ದಾರೆ.
ಕನಕಗಿರಿ ಬೆಂಗಳೂರಿನಿಂದ 410 ಕಿಲೋ ಮೀಟರ್ ದೂರದಲ್ಲಿದೆ. ಹೊಸಪೇಟೆಯಿಂದ ಕನಕಗಿರಿಗೆ 80 ಕಿಲೋ ಮೀಟರ್, ಹೊಸಪೇಟೆಗೆ ಮತ್ತು ಕೊಪ್ಪಳಕ್ಕೆ ಟ್ರೈನ್ ಸೌಲಭ್ಯವಿದೆ. ಕೊಪ್ಪಳದಿಂದ ಕನಕಗಿರಿಗೆ 45 ಕಿಲೋ ಮೀಟರ್. ಗಂಗಾವತಿಯಿಂದ ಕನಕಗಿರಿಗೆ ಕೇವಲ 22 ಕಿಲೋ ವೀಟರ್, ಗಂಗಾವತಿಗೆ ರಾಜ್ಯದ ಎಲ್ಲ ಪ್ರಮುಖ ನಗರಗಳಿಂದಲೂ ಬಸ್ ಸೌಲಭ್ಯವಿದೆ. ಬಳ್ಳಾರಿಯಿಂದ ಕನಕಗಿರಿಗೆ 90 ಕಿಲೋ ಮೀಟರ್.
All info from google
Thank you Google..